ಆನ್‌ಲೈನ್‌ ಮೂಲಕ ಕುರಿ, ಮೇಕೆ ಮಾಂಸ

  |   Karnatakanews

ಬೆಂಗಳೂರು: ಆನ್‌ಲೈನ್‌ ಮೂಲಕ ಮನೆ ಮನೆಗೆ ಕುರಿ ಮತ್ತು ಮೇಕೆ ಮಾಂಸ ಮಾರಾಟ ವ್ಯವಸ್ಥೆಯನ್ನು ಶೀಘ್ರದಲ್ಲಿ ಜಾರಿಗೆ ತರಲಿದ್ದೇವೆ ಎಂದು ರಾಜ್ಯ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಹಕಾರಿ ಸಂಘದ ಅಧ್ಯಕ್ಷ ಸಿ.ವಿ.ಲೋಕೇಶ್‌ ಗೌಡ ಮಾಹಿತಿ ನೀಡಿದರು.

ಬಾಗಲಕೋಟೆ, ಚಿತ್ರದುರ್ಗ ಹಾಗೂ ಚಿಕ್ಕಬಳ್ಳಾಪುರದಲ್ಲಿ ಸಂಘದ ವತಿಯಿಂದ ಶೀಘ್ರದಲ್ಲಿ ಕಸಾಯಿಖಾನೆ ಆರಂಭಿಸಲಾಗುತ್ತಿದೆ. ಮನೆ ಮನೆಗೆ ಆನ್‌ಲೈನ್‌ ಮೂಲಕ ಕುರಿ, ಮೇಕೆ ಮಾಂಸ ತಲುಪಿಸಲು ಬೇಕಾದ ವ್ಯವಸ್ಥೆ ಮಾಡಲಿದ್ದೇವೆ. ಡಯಲ್‌ ಫಾರ್‌ ಮಟನ್‌ ಎಂಬ ಆ್ಯಪ್‌ ರೂಪಿಸಿ ಮನೆ-ಮನೆಗೆ ಶುದ್ಧ ಮತ್ತು ಗುಣಮಟ್ಟದ ಕುರಿ ಮತ್ತು ಮೇಕೆ ಮಾಂಸ ನೀಡಲಿದ್ದೇವೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಾಯೋಗಿಕವಾಗಿ ಬೆಂಗಳೂರು ನಗರದ ಉತ್ತರ ಭಾಗದಲ್ಲಿ ಮಾಂಸ ವಿತರಣೆ ಮಾಡಲಾಗುತ್ತಿದೆ. ಇದು ಯಶಸ್ವಿಯಾದಲ್ಲಿ, ಆನ್‌ಲೈನ್‌ ಆಹಾರ ಸರಬರಾಜು ಸಂಸ್ಥೆಗಳಾದ ಸ್ವಿಗಿ, ಜೋಮ್ಯಾಟೋ ಮಾದರಿಯಲ್ಲಿ ರಾಜ್ಯಾದ್ಯಂತ ಗ್ರಾಹಕರಿಂದ ಡಯಲ್‌ ಫಾರ್‌ ಮಟನ್‌ ಆ್ಯಪ್‌ ಮೂಲಕ ಮಾಂಸದ ಬೇಡಿಕೆ ಪಡೆದು ಮನೆಗೆ ಪೂರೈಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು ಮತ್ತು ಕುರಿ ಸಾಕಾಣಿಕೆದಾರರಿಗೆ ಹೆಚ್ಚಿನ ಲಾಭ ದೊರಕಿಸಿ ಕೊಡಬೇಕೆಂಬ ಉದ್ದೇಶದಿಂದ 24 ಜಿಲ್ಲೆಗಳಲ್ಲಿ ಕುರಿ ಮತ್ತು ಮೇಕೆ ಖರೀದಿ ಕೇಂದ್ರ ಸ್ಥಾಪಿಸಲಾಗುತ್ತಿದೆ. ತೂಕ ಆಧಾರಿತವಾಗಿ ಕುರಿ ಮತ್ತು ಮೇಕೆ ಖರೀದಿ ನಡೆಯಲಿದೆ. ಹೈನುಗಾರಿಕೆಗೆ ಬರುವ ಯುವ ಸಮೂಹಕ್ಕೆ ಪ್ರೋತ್ಸಾಹ ನೀಡುವುದು ಸೇರಿದಂತೆ ಈ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೆಲ ಸೌಲಭ್ಯ ನೀಡುವಂತೆ ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್‌ ಅವರಿಗೆ ಮನವಿ ಮಾಡಿದ್ದೇವೆ ಎಂದರು. ಸಂಘದ ನಿರ್ದೇಶಕರಾದ ಎಚ್‌.ಕೆ. ಕುರಿ ತಮ್ಮಯ್ಯ, ಧನರಾಜ್‌, ಮಹಾಲಿಂಗಪ್ಪ ಸುದ್ದಿಗೋಷ್ಠಿಯಲ್ಲಿದ್ದರು....

ಫೋಟೋ - http://v.duta.us/6Jt_VAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/GU-Q3wAA

📲 Get Karnatakanews on Whatsapp 💬