ತಿನಿಸಿನ ಜತೆ ಬಲೂನ್ ನುಂಗಿ ಐದು ವರ್ಷದ ಮಗು ಸಾವು
ಮರಿಯಮ್ಮನಹಳ್ಳಿ: ಮಕ್ಕಳ ತಿನಿಸುಗಳ ಜತೆ ಉಚಿತವಾಗಿ ಕೊಡುವ ಬಲೂನ್ ನುಂಗಿ ಐದು ವರ್ಷದ ಮಗು ಮೃತಪಟ್ಟ ಘಟನೆ ಸಮೀಪದ ಅಯ್ಯನಹಳ್ಳಿ ಗ್ರಾಮದಲ್ಲಿ ಜರುಗಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅಯ್ಯನಹಳ್ಳಿ ಗ್ರಾಮದ ಹರಿಜನ ಚಂದ್ರಪ್ಪ ಮತ್ತು ಕವಿತಾ ದಂಪತಿಯ ಮಗು ಎಚ್.ಈರಮ್ಮ (5) ಮೃತಪಟ್ಟ ದುರ್ದೈವಿ. ಅ.3ರಂದು ಗುರುವಾರ ಬೆಳಗ್ಗೆ ಚಂದ್ರಪ್ಪ ತನ್ನೆರಡು ಹೆಣ್ಣು ಮಕ್ಕಳಿಗೆ ದುಡ್ಡು ಕೊಟ್ಟು ತಿಂಡಿ ತಿನ್ನಲು ಕಳುಹಿಸಿದ್ದಾರೆ.
ಅವರ ಮನೆ ಸಮೀಪದ ತಾಯಮ್ಮನಗುಡಿ ಹತ್ತಿರವಿರುವ ಗೂಡಂಗಡಿಯೊಂದರಲ್ಲಿ ಫ್ರಿ ಬಲೂನ್ ಸ್ನ್ಯಾಕ್ಸ್ ಎಂಬ ಹೆಸರಿನ ತಿನಿಸಿನ ಜತೆ ಉಚಿತವಾಗಿ ಕೊಡುವ ಬಲೂನನ್ನು ತೆಗೆದುಕೊಂಡು ಹೋಗಿದ್ದಾರೆ. ಗುಡಿ ಹತ್ತಿರ ತಿನಿಸನ್ನು ತಿಂದು ಬಲೂನನ್ನು ಬಾಯಲ್ಲಿಟ್ಟುಕೊಂಡು ಆಟವಾಡುತ್ತಿದ್ದಾಗ ಮಗು ಈರಮ್ಮನ ಗಂಟಲಲ್ಲಿ ಸಿಲುಕಿಕೊಂಡಿದೆ. ಅಲ್ಲಿಂದ ಮನೆಗೆ ಓಡಿ ಹೋಗಿ ತಂದೆ ಹತ್ತಿರ ಹೇಳುವಷ್ಟರಲ್ಲಿ ಕುಸಿದುಬಿದ್ದಿದೆ.
ಕೂಡಲೇ ಮರಿಯಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ್ದರಿಂದ ಆಂಬ್ಯುಲೆನ್ಸ್ ಮೂಲಕ ಹೊಸಪೇಟೆ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ತಪಾಸಣೆ ಮಾಡಿದಾಗ ಜೀವ ಹೋಗಿದೆ ಎಂದು ವೈದ್ಯರು ಹೇಳಿದ್ದಾರೆ. ಭಾವನಾತ್ಮಕ ಕಾರಣಗಳಿಗಾಗಿ ಮರಣೋತ್ತರ ಪರೀಕ್ಷೆಗೆ ಸಂಬಂಧಿಕರು ಒಪ್ಪದೆ ಮಗುವಿನ ಕಳೇಬರವನ್ನು ಅಯ್ಯನಹಳ್ಳಿ ಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಿದ್ದಾರೆ.
ಫೋಟೋ - http://v.duta.us/VG9bPQAA
ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/A1HVuAAA