ಇ-ಕೆವೈಸಿಗೆ ಸರ್ವರ್‌ ಸಮಸ್ಯೆ

  |   Gadagnews

ಗಜೇಂದ್ರಗಡ: ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ ಪ್ರಕಾರ ಪಡಿತರ ಚೀಟಿಯಲ್ಲಿನ ಪ್ರತಿ ಸದಸ್ಯರು ಬಯೋಮೆಟ್ರಿಕ್‌ ಅಧಿಕೃತಗೊಳಿಸಬೇಕೆಂದು ಆಹಾರ ಇಲಾಖೆ ಸೂಚಿಸಿರುವ ಹಿನ್ನೆಲೆಯಲ್ಲಿ ಎಲ್ಲ ನ್ಯಾಯಬೆಲೆ ಅಂಗಡಿಗಳ ಎದುರು ಪಡಿತರದಾರರು ಜಮಾಯಿಸಿದ್ದಾರೆ. ಆದರೆ ಸರ್ವರ್‌ ಸಮಸ್ಯೆಯಿಂದ ಸಾರ್ವಜನಿಕರು ಪರದಾಡುವಂತಾಗಿದೆ.

ಪಡಿತರ ಚೀಟಿಯಲ್ಲಿನ ನೈಜ ಫಲಾನುಭವಿಗಳನ್ನು ಪತ್ತೆ ಹಚ್ಚಲು ಆಹಾರ ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳ ಇಲಾಖೆಯು ಇ-ಕೆವೈಸಿ ಜಾರಿಗೆ ತಂದು ವಾರ ಕಳೆದಿದೆ. ಆದರೆ ಸರಿಯಾದ ಸರ್ವರ್‌ ಬಾರದ ಪರಿಣಾಮ ಪಡಿತರದಾರರು ಸರತಿಯಲ್ಲಿ ನಿಂತು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿತ್ಯ ಕೂಲಿ ಮಾಡಿ ಬದುಕು ಸಾಗಿಸುವ ಜನರು ತಮ್ಮ ದುಡಿಮೆ ಬಿಟ್ಟು ನ್ಯಾಯ ಬೆಲೆ ಅಂಗಡಿ ಮುಂದೆ ನಿಲ್ಲುವಂತಾಗಿದೆ.

ನ್ಯಾಯಬೆಲೆ ಕೆಲ ಅಂಗಡಿಗಳಲ್ಲಿ ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಡ್‌ ಉಪಯೋಗಿಸುತ್ತಿದ್ದರೆ, ಇನ್ನೂ ಕೆಲವು ಅಂಗಡಿಗಳಲ್ಲಿ ಡಾಟಾ ಕಾರ್ಡ್‌ ಬಳಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ವರ್‌ ಮಾತ್ರ ಯಾವಾಗ ಬರುತ್ತೂ, ಹೋಗುತ್ತೂ ಎಂಬುದು ತಿಳಿಯದಂತಾಗಿದೆ.

ನಿತ್ಯ ನ್ಯಾಯಬೆಲೆ ಅಂಗಡಿಗಳ ಎದುರು ಪಡಿತರದಾರರು ಕುಟುಂಬ ಸಮೇತ ಜಮಾಯಿಸುತ್ತಿದ್ದಾರೆ. ಕೆವೈಸಿ ಅಪಲೋಡ್‌ ಮಾಡದಿದ್ದರೆ ಪಡಿತರ ಎಲ್ಲಿ ಕೈ ತಪ್ಪುತ್ತದೆಯೋ ಎಂಬ ಭಯ ಜನರಲ್ಲಿ ಕಾಡತೊಡಗಿದೆ. ಹೀಗಾಗಿ ಬೆಳಗ್ಗೆಯಿಂದ ಸಂಜೆಯವರೆಗೂ ಸರತಿಯಲ್ಲಿ ನಿಂತು ಕೆವೈಸಿ ಅಪಲೋಡ್‌ ಮಾಡುತ್ತಿದ್ದಾರೆ. ಈ ಮಧ್ಯೆ ಆಗಾಗ ವಿದ್ಯುತ್‌ ಕೈಕೊಡುತ್ತಿದೆ. ಈ ಎಲ್ಲ ಸಮಸ್ಯೆ ಪರಿಹಾರಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.

ಫೋಟೋ - http://v.duta.us/AHculgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/63bX7AAA

📲 Get Gadag News on Whatsapp 💬