ಕೋತಿಯ ಅಂತ್ಯಕ್ರಿಯೆ ನಡೆಸಿ, ಗುಡಿ ಕಟ್ಟಿದರು

  |   Chitradurganews

ಚಳ್ಳಕೆರೆ: ಕೋತಿಯೊಂದು ವಿದ್ಯುತ್‌ ಕಂಬ ದಾಟುವ ಅವಸರದಲ್ಲಿ ಮೇಲಿನಿಂದ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿತ್ತು. ಇದನ್ನು ಕಂಡ ಗ್ರಾಮಸ್ಥರು ಮಮ್ಮಲ ಮರುಗಿ ಕೋತಿಯ ಅಂತ್ಯಸಂಸ್ಕಾರ ನೆರವೇರಿಸಿದರು. ಮಾತ್ರವಲ್ಲ, ಚಿಕ್ಕ ಗುಡಿ ಕಟ್ಟಿ ಧನ್ಯತಾ ಭಾವ ಮೆರೆದರು…

ಇದೆಲ್ಲ ನಡೆದಿದ್ದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿ ಮೇಗಳ ಗೊಲ್ಲರಹಟ್ಟಿಯಲ್ಲಿ. ಭಾನುವಾರ ಬೆಳಿಗ್ಗೆ ವಿದ್ಯುತ್‌ ಕಂಬ ದಾಟುವ ಸಂದರ್ಭದಲ್ಲಿ ಕೋತಿ ಕೆಳಕ್ಕೆ ಬಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ಕೋತಿಯ ಜೀವ ಉಳಿಸಲು ಪ್ರಯತ್ನಿಸಿದರೂ ಅಷ್ಟರಲ್ಲಾಗಲೇ ಅದು ಅಸುನೀಗಿತ್ತು.

ಗ್ರಾಮದ ಸುತ್ತಮುತ್ತಲಿನ ಮರ ಹಾಗೂ ಮನೆಗಳ ಮೇಲೆ ಆಶ್ರಯ ಪಡೆದಿದ್ದ ಕೋತಿಯ ಆಕಸ್ಮಿಕ ಮರಣಕ್ಕೆ ಗ್ರಾಮಸ್ಥರು ಕಂಬನಿ ಮಿಡಿದರು. ಗ್ರಾಮದ ಹಿರಿಯ ಮುಖಂಡರ ಸಲಹೆ ಮೇರೆಗೆ ಯುವಕರು ಕೋತಿಯ ಅಂತ್ಯಕ್ರಿಯೆ ನೆರವೇರಿಸಿದರು. ಅಲ್ಲದೆ ಕೋತಿಯನ್ನು ಹೂತು ಅಂತ್ಯಕ್ರಿಯೆ ಮಾಡಿದ ಸ್ಥಳದಲ್ಲಿ ಚಿಕ್ಕ ಗುಡಿಯೊಂದನ್ನು ನಿರ್ಮಿಸಿ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಹಿರಿಯರು, ಕಳೆದ ಹಲವಾರು ವರ್ಷಗಳಿಂದ ಮಳೆ-ಬೆಳೆ ಇಲ್ಲದೆ ನೊಂದಿದ್ದೇವೆ. ನಮ್ಮ ಗ್ರಾಮದಲ್ಲಿ ಆಕಸ್ಮಿಕವಾಗಿ ಮೃತಪಟ್ಟ ಕೋತಿಯ ಅಂತ್ಯಕ್ರಿಯೆಯನ್ನು ನಡೆಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಕಷ್ಟ ಎದುರಾಗಬಹುದು ಎಂಬ ಆತಂಕದಿಂದ ಅಂತ್ಯಸಂಸ್ಕಾರ ನಡೆಸಿರುವುದಾಗಿ ತಿಳಿಸಿದರು.

ಫೋಟೋ - http://v.duta.us/iOKZTwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/FZRPNAAA

📲 Get Chitradurga News on Whatsapp 💬